ಪಕ್ಕ ನಾಟಿ ಸ್ಟೈಲ್ ನಲ್ಲಿ ಬದನೆಕಾಯಿ ಎಣಗಾಯಿ ಮಾಡುವುದು ಹೇಗೆ ಗೊತ್ತೇ?? ಅಕ್ಕಿ/ಜೋಳದ ರೊಟ್ಟಿ ಜೊತೆಗೆ ಎಂಥ ಕಾಂಬಿನೇಶನ್ ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಕ್ಕಿರೊಟ್ಟಿ ಮಾಡಿದ್ರೆ ಅಥವಾ ಜೋಳದ ರೊಟ್ಟಿ ಮಾಡಿದ್ರೆ ಏನಿಲ್ಲಾ ಅಂದ್ರೂ ಒಂದು ಎಣಗಾಯಿ/ ಎಣ್ಣೆಗಾಯಿ ಇದ್ದರೆ ಭಲು ಭೋಜನವಾಗತ್ತೆ. ಎಣ್ಣೆಗಾಯಿಯನ್ನು ಬದನೆಕಾಯಿ ಇಷ್ಟಪಡದವರೂ ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಇನ್ನು ಉತ್ತರ ಕರ್ನಾಟಕದ ಈ ಫೇಮಸ್ ರೆಸಿಪಿ ಹೇಗೆ ಮಾಡೋದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿಗಳು: ಗುಂಡು ಬದನೆಕಾಯಿ – 10-15, ತೆಂಗಿನಕಾಯಿ – ಅರ್ಧ ಹೋಳು, ಚಕ್ಕೆ, ಲವಂಗ – ಸ್ವಲ್ಪ, ಗಸಗಸೆ – ಸ್ವಲ್ಪ, ಈರುಳ್ಳಿ – 2-3, ಬೆಳ್ಳುಳ್ಳಿ – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಟೊಮೆಟೋ – 2, ಶುಂಠಿ – ಸ್ವಲ್ಪ, ದನಿಯಾ ಪುಡಿ – 1 ಚಮಚ, ಖಾರದ ಪುಡಿ – 2-3 ಚಮಚ, ಎಣ್ಣೆ – ಸ್ವಲ್ಪ

ಮಾಡುವ ವಿಧಾನ: ಮೊದಲಿಗೆ ತೆಂಗಿನಕಾಯಿ ತುರಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಗಸಗಸೆ, ಚಕ್ಕೆ, ಲವಂಗ, ಎಲ್ಲವನ್ನೂ ಒಂದು ಮಿಕ್ಸರ್ ಜಾರ್ ಗೆ ಹಾಕಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿ, ಟೊಮೆಟೋ, ದನಿಯಾ ಪುಡಿ, ಖಾರದ ಪುಡಿ ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಈಗ ಒಂದು ಗುಂಡು ಬದನೆಕಾಯಿಯನ್ನು ಚೆನ್ನಾಗಿ ತೊಳೆದು ನಾಲ್ಕು ಭಾಗವಾಗಿ ಕತ್ತರಿಸಿಕೊಳ್ಳಿ. ಒಂದು ಪಾತ್ರೆಗೆ ರುಬ್ಬಿಟ್ಟುಕೊಂಡ ಮಸಾಲೆ ಹಾಕಿ ಅದಕ್ಕೆ ಅರಿಶಿನ, ಉಪ್ಪು ಹಾಗೂ ಎಣ್ಣೆ 2 ಚಮಚ ಹಾಕಿ ಚೆನ್ನಾಗಿ ಕಲಸಿ.

ಈಗ ಸಿದ್ಧವಾದ ಮಸಾಲೆಯನ್ನು ಕತ್ತರಿಸಿಕೊಂಡ ಬದನೆಕಾಯಿಯೊಳಗೆ ತುಂಬಿ. ಈಗ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು ಹಾಕಿ ಸಿಡಿಸಿ. ನಂತರ ಕತ್ತರಿಸಿಟ್ಟುಕೊಂಡ ಈರುಳ್ಳಿ ಹಾಕಿ ಅದು ಕೆಂಪಗಾಗುವವರೆಗೂ ಹುರಿದುಕೊಳ್ಳಿ. ನಂತರ ಮಸಾಲೆ ತುಂಬಿದ ಬದನೆಕಾಯಿ ಹಾಗೂ ಮಿಕ್ಕ ಸಿದ್ದವಾದ ಮಸಾಲೆಯನ್ನು ಹಾಕಿ. ಬದನೆಕಾಯಿ ಬೇಯಲು ಬೇಕಾಗುವಷ್ಟು ನೀರು ಹಾಕಿ ಬೇಯಿಸಿ/ ಮುಚ್ಚಳ ಮುಚ್ಚಿ ಬೇಯಿಸಿ. ಆಗಾಗ ಬದನೆಕಾಯಿಯ ಮಗ್ಗಲು ಬದಲಿಸಿ. ಆಗ ಬದನೆಕಾಯಿ ಚೆನ್ನಾಗಿ ಬೇಯುತ್ತದೆ. ಬದನೆಕಾಯಿ ಬೆಂದನಂತರ ಗ್ಯಾಸ್ ಆಫ್ ಮಾಡಿ. ರುಚಿಕರವಾದ ಎಣ್ಣೆಗಾಯನ್ನು ರೊಟ್ಟಿಜೊತೆ, ಅನ್ನದ ಜೊತೆ ಸವಿಯಿರಿ.