ಹೋಟೆಲ್ ಗೆ ಯಾಕೆ ಹೋಗಬೇಕು?? ಮನೆಯಲ್ಲಿಯೇ ಚಿಟಿಕೆಯಷ್ಟು ಸುಲಭವಾಗಿ ಕ್ಯಾಪ್ಸಿಕಂ ರೈಸ್ ಮಾಡೋದು ಎಷ್ಟು ಸುಲಭ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕ್ಯಾಪ್ಸಿಕಂ ರೈಸ್ ಒಂಥರಾ ವಿಶೇಷವಾದ ರುಚಿ ಕೊಡತ್ತೆ. ಆದರೆ ಸರಿಯಾದ ರೀತಿಯಲ್ಲಿ ಅದನ್ನ ಮಾಡೋಕೆ ಗೊತ್ತಿರಬೇಕು. ಸಾಮಾನ್ಯವಾಗಿ ಹೊಟೆಲ್ ಗಳಲ್ಲಿ ಕೊಡುವ ಕ್ಯಾಪ್ಸಿಕಂ ರೈಸ್ ಎಲ್ಲರಿಗೂ ಇಷ್ಟವಾಗುತ್ತೆ. ಎಷ್ಟೋ ಬಾರಿ ಅದ್ಯಾವ ಮಸಾಲ ಬಳಸುತ್ತಾರೋ ಅಂಥ ಅಂದುಕೊಂಡಿರ್ತಿರಿ ಅಲ್ವಾ? ಹಾಗಾದರೆ ಅದೇ ರುಚಿಯ ಕ್ಯಾಪ್ಸಿಕಂ ಬಾತ್ ಹೀಗೆ ಮಾಡಬಹುದು. ಇಲ್ಲಿದೆ ರೆಸಿಪಿ.

ಬೇಕಾಗುವ ಸಾಮಗ್ರಿಗಳು: ಕ್ಯಾಪ್ಸಿಕಂ ಮೂರು, ಎರಡು ಟೇಬಲ್ ಸ್ಪೂನ್ ಶೇಂಗಾ ಮತ್ತು ಕೊತ್ತಂಬರಿ ಬೀಜ, ಒಂದು ಟೇಬಲ್ ಸ್ಪೂನ್ ಕಡಲೆಬೇಳೆ, ಉದ್ದಿನಬೇಳೆ, ಬಿಳಿ ಎಳ್ಳು ಮತ್ತು ಜೀರಿಗೆ, ಅರ್ಧ ಟೇಬಲ್ ಸ್ಪೂನ್ ಅರಿಶಿಣ ಮತ್ತು ಹಿಂಗು, ಐದರಿಂದ ಆರು ಬ್ಯಾಡಗಿ ಮೆಣಸು, ನಾಲ್ಕು ಗುಂಟೂರು ಮೆಣಸು, ಅರ್ಧ ಇಂಚು ಚಕ್ಕೆ, ಒಂದು ಕಪ್ ಒಣಕೊಬ್ಬರಿ ತುರಿ, ಒಂದು ನೆಲ್ಲಿಕಾಯಿ ಗಾತ್ರದ ಹುಣಸೇಹಣ್ಣು, ಸ್ವಲ್ಪ ಸಾಸಿವೆ, ಕರಿಬೇವಿನ ಸೊಪ್ಪು, ಎರಡು ಕಪ್ ಅಕ್ಕಿಯಿಂದ ತಯಾರಿಸಿದ ಅನ್ನ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ನಂತರ ಶೇಂಗಾ ಹಾಕಿ ಹದವಾಗಿ ಹುರಿದು ವರ್ಗಾಯಿಸಿ, ಅದೇ ಬಾಣಲೆಗೆ ಕಡಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಬ್ಯಾಡಗಿ ಮೆಣಸಿನಕಾಯಿ, ಗುಂಟೂರು ಮೆಣಸಿನಕಾಯಿ, ಚಕ್ಕೆ, ಬಿಳಿ ಎಳ್ಳು ಮತ್ತು ಸ್ಪಲ್ಪ ಹಿಂಗನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಈಗ ಗ್ಯಾಸ್ ಆರಿಸಿ, ಬಿಸಿಯಿರುವಾಗಲೇ ಒಣಕೊಬ್ಬರಿ ತುರಿ ಮತ್ತು ಹುಣಸೇಹಣ್ಣು ಸೇರಿಸಿ ತಣ್ಣಗಾದ ನಂತರ ಎಲ್ಲವನ್ನೂ ಮಿಕ್ಸಿಗೆ ಹಾಕಿ ಜೊತೆಯಲ್ಲಿ ಹುರಿದಿಟ್ಟ ಶೇಂಗಾವನ್ನು ಸೇರಿಸಿ ನುಣ್ಣಗೆ ಪೌಡರ್ ಮಾಡಿಕೊಳ್ಳಿ.

ನಂತರ ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಸಾಸಿವೆ, ಉದ್ದಿನಬೇಳೆ, ಅರಿಶಿಣ, ಕರಿಬೇವು, ಬ್ಯಾಡಗಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಫ್ರೈ ಆದ ನಂತರ ಹೆಚ್ಚಿದ ಕ್ಯಾಪ್ಸಿಕಂ, ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಬೇಕು. ನಂತರ ಪೌಡರ್ ಮಾಡಿದ ಮಸಾಲೆ ಹಾಕಿ ಫ್ರೈ ಮಾಡಿದ ನಂತರ ಉದುರುದುರಾಗಿ ತಯಾರಿಸಿದ ಅನ್ನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಕ್ಯಾಪ್ಸಿಕಂ ರೈಸ್ ಸವಿಯಲು ಸಿದ್ಧ. ಈ ರೆಸಿಪಿ ತಯಾರಿಸುವ ವಿಡಿಯೋ ಈ ಕೆಳಗೆ ಕೊಡಲಾಗಿದೆ.