ಚಳಿ ಗೆ ಬಿಸಿ ಬಿಸಿ ಏನಾದ್ರು ಬೇಕು ಅನಿಸಿದರೆ ಈ ರೀತಿಯ ಪುದೀನಾ ರಸಂ ಟ್ರೈ ಮಾಡಿ ನೋಡಿ, ಎಲ್ಲರೂ ಇಷ್ಟ ಪಡ್ತಾರೆ.

ನಮಸ್ಕಾರ ಸ್ನೇಹಿತರೇ ಪುದೀನಾ ಸೊಪ್ಪು ಅತ್ಯಂತ ಉತ್ತಮ ಘಮವನ್ನು ಹೊಂದಿರುವ ಜೊತೆಗೆ ಆರೋಗ್ಯಕ್ಕೂ ಉತ್ತಮವಾದ ಸೊಪ್ಪು. ಪುದೀನಾ ಸೊಪ್ಪಿನ ರೈಸ್ ತಿನ್ನಲು ಬಹುರುಚಿ. ಆದರೆ ಇದರೆ ಪುದೀನಾ ರಸಂ ನ್ನು ಒಮ್ಮೆ ಮಾಡಿನೋಡಿ. ಅದರ ರುಚಿಯೇ ಬೇರೆ! ಇಲ್ಲಿದೆ ನೋಡಿ ರೆಸಿಪಿ.

ಬೇಕಾಗುವ ಸಾಮಗ್ರಿಗಳು: ಮುಕ್ಕಾಲು ಕಪ್ ತೊಗರಿಬೇಳೆ, ಒಂದು ಹಿಡಿಯಷ್ಟು ಪುದೀನಾ ಸೊಪ್ಪು, ಒಂದು ಟೊಮೇಟೊ, ಒಂದು ಚಮಚ ಧನಿಯಾ ಮತ್ತು ಜೀರಿಗೆ, ಅರ್ಧ ಚಮಚ‌ ಕಾಳುಮೆಣಸು, ಎರಡು ಬ್ಯಾಡಗಿ ಮೆಣಸು ಮತ್ತು ಗುಂಟೂರು ಮೆಣಸು, ಸ್ವಲ್ಪ ಸಾಸಿವೆ, ಅರಿಶಿಣ, ಹಿಂಗು, ಅರ್ಧ ಚಮಚ ಬೆಲ್ಲ, ಕರಿಬೇವು, ಕೊತ್ತಂಬರಿ ಸೊಪ್ಪು, ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ತೊಗರಿಬೇಳೆಯನ್ನು ತೊಳೆದು ಸ್ವಲ್ಪ ಅರಿಶಿಣ ಮತ್ತು ಎಣ್ಣೆಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಪುದೀನಾ ಎಲೆಗಳನ್ನು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ, ಸೋಸಿಡಬೇಕು. ನಂತರ ಒಂದು ಬಾಣಲೆಗೆ ಧನಿಯಾ, ಜೀರಿಗೆ, ಕಾಳುಮೆಣಸು, ಬ್ಯಾಡಗಿ ಮೆಣಸು, ಗುಂಟೂರು ಮೆಣಸು ಹಾಕಿ ಗರಿಗರಿಯಾಗಿ ಹುರಿದು ಮಿಕ್ಸಿಗೆ ಹಾಕಿ ಪುಡಿ ಮಾಡಬೇಕು.

ಈಗ ಒಂದು ಕಡಾಯಿಗೆ ಎಣ್ಣೆ, ಸಾಸಿವೆ, ಜೀರಿಗೆ, ಹಿಂಗು ಮತ್ತು ಹೆಚ್ಚಿದ ಟೊಮೆಟೋ ಹಾಕಿ ಮೆತ್ತಗಾಗುವವರೆಗೆ ಚೆನ್ನಾಗಿ ಫ್ರೈ ಮಾಡಬೇಕು. ಫ್ರೈ ಆದ ನಂತರ ಸ್ವಲ್ಪ ಅರಿಶಿಣ, ಕರಿಬೇವಿನ ಸೊಪ್ಪು, ಪುದೀನಾ ರಸ, ಬೇಯಿಸಿದ ತೊಗರಿಬೇಳೆ, ಪುಡಿ ಮಾಡಿದ ಮಸಾಲೆ, ಬೆಲ್ಲ, ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿದರೆ ರುಚಿಯಾದ ಪುದೀನಾ ರಸಂ ಸಿದ್ಧ.